ಪಿತ್ತವರ್ಣಕಗಳು -
ಪಿತ್ತದ ಘಟಕಗಳಾಗಿದ್ದು ಅದರ ವಿಶಿಷ್ಟಬಣ್ಣಕ್ಕೆ ಕಾರಣವಾದ ವಸ್ತುಗಳು (ಬೈಲ್ ಪಿಗ್‍ಮೆಂಟ್ಸ್). ಇವು ಬಿಲಿರೂಬಿನ್, ಬಿಲಿವರ್ಡಿನ್ ಮುಂತಾದ ರಾಸಾಯನಿಕಗಳು. ಪಿತ್ತವರ್ಣಕಗಳ ಬಗೆಗಿನ ತಿಳಿವಳಿಕೆ ಹೆಚ್ಚು ಕಡಿಮೆ ಇತ್ತೀಚಿನದೆಂದು ಹೇಳಬಹುದು. ಆದರೆ ಕಾಮಾಲೆ ಇರುವವರ ದೇಹದಲ್ಲಿ ಪಿತ್ತವರ್ಣಕಗಳು ಹೆಚ್ಚು ಮೊತ್ತದಲ್ಲಿ ಇರುವುವೆಂದು ವೈದ್ಯಕೀಯವಾಗಿ ಪುರಾತನ ಕಾಲದಿಂದಲೂ ಅಂಗೀಕೃತವಾಗಿದೆ. 

ಚಿತ್ರ-1

ಪಿತ್ತವರ್ಣಕಗಳು ಯಕೃತ್ತಿನಲ್ಲಿ ಮಾತ್ರ ಉತ್ಪತ್ತಿಯಾಗುವುವೆಂದು ಮೊದಲು ನಂಬಲಾಗಿತ್ತು. ನಿಜಕ್ಕೂ ಅವು ಯಕೃತ್ತಿಗಿಂತಲೂ ಹೆಚ್ಚಾಗಿ ದೇಹದ ನಾನಾ ಭಾಗಗಳ ರೆಟಿಕ್ಯುಲೋಎಂಡೊತೀಲಿಯಮ್ ಕೋಶಗಳಲ್ಲಿ ಉತ್ಪತ್ತಿಯಾಗಿ ರಕ್ತಕ್ಕೆ ಸೇರಿ ಅನಂತರ ಪಿತ್ತದ ಮೂಲಕ ವಿಸರ್ಜಿತವಾಗಿ ದೇಹದಿಂದ ಹೊರಕ್ಕೆ ಸಾಗುತ್ತವೆ.

ಪಿತ್ತವರ್ಣಕಗಳು ರಕ್ತದ ಹೀಮೋಗ್ಲಾಬಿನ್ ವರ್ಣಕದ ಅವನತಿಯಿಂದ ಲಭಿಸುತ್ತವೆ. ರೆಟಿಕ್ಯುಲೋಎಂಡೊತೀಲಿಯಮ್ ಕೋಶಗಳಲ್ಲಿ ಕೆಂಪು ರಕ್ತ ಕಣಗಳ ಆಯುಃ ಪರಿಮಾಣದ ಕೊನೆಯಲ್ಲಿ ಆಗುವ ಅಪಕ್ಷಯದಿಂದ ಹೀಮೊಗ್ಲಾಬಿನ್ ಬಿಡುಗಡೆ ಆಗುವುದು. ಇದು ಆ ಕೋಶಗಳಲ್ಲಿ ಬಿಲಿರೂಬಿನ್ ಇತ್ಯಾದಿಯಾಗಿ ಪರಿವರ್ತಿತವಾಗಿ ರಕ್ತಗತವಾಗುತ್ತದೆ. ಯಕೃತ್ತಿನ ಕೋಶಗಳು ರಕ್ತದಿಂದ ಬಿಲಿರೂಬಿನ್ ಮೂಂತಾದ ವರ್ಣಕಗಳನ್ನು ತೆಗೆದು ಅವನ್ನು ಪಿತ್ತದ ಜೊತೆಯಲ್ಲಿ ನಾಳಗಳ ಮೂಲಕ ಪಿತ್ತಕೋಶಕ್ಕೆ ಹೊರಸೂಸುವುವು. ಅಲ್ಲಿ ನೀರು ಮತ್ತು ಲವಣಗಳು ಹೀರಲ್ಪಟ್ಟು ಪಿತ್ತ ರಸ ಸಾಂದ್ರೀಕೃತವಾಗಿ ಆಗಾಗ್ಗೆ ಕರುಳಿನ ಆದಿಭಾಗವಾದ ಡುಯೊಡೀನಮ್ಮಿಗೆ ತಳ್ಳಲ್ಪಡುವುದು. 

ಮಾನವ ಪಿತ್ತದ ಪ್ರಮುಖ ವರ್ಣಕ ಬಿಲಿರೂಬಿನ್. ರಕ್ತದ ಹಿಮೋಗ್ಲಾಬಿನ್ನಿನಲ್ಲಿರುವ ಹಿಮ್ಯಾಟಿನ್ ಎಂಬ ಘಟಕದ ಅಪಕ್ಷಯದಿಂದ ಉಂಟಾಗುವ ಇದು ಹಳೆಯ ರಕ್ತಸ್ರಾವದ ಭಾಗಗಳಲ್ಲಿ ಹೆಮಾಟಾಯ್ಡಿನ್ ಎಂಬುದಾಗಿ ಸ್ವತಂತ್ರವಾಗಿಯೂ ರಕ್ತ ಮತ್ತು ಪಿತ್ತ ರಸಗಳಲ್ಲಿ ವಿಲೀನಿಸುವ ಸ್ವಭಾವವುಳ್ಳ ಸೋಡಿಯಮ್ ಲವಣವಾಗಿಯೂ ಇವು ಪಿತ್ತಾಂಶಗಳಲ್ಲಿ ವಿಲೀನಿಸದೆ ಇರುವ ಸ್ವಭಾವವುಳ್ಳ ಕ್ಯಾಲ್ಸಿಯಮ್, ಮ್ಯಾಗ್ನಿಸಿಯಮ್ ಲವಣವಾಗಿಯೂ ಇರುತ್ತದೆ. ಇದನ್ನು ಮೊದಲಿಗೆ ಪಿತ್ರ್ತಾಶಗಳಿಂದ ಬೇರ್ಪಡಿಸಲಾಯಿತು. 

ಬಿಲಿವರ್ಡಿನ್ ಎನ್ನುವ ಅಚ್ಚಹಸಿರು ಬಣ್ಣದ ಪಿತ್ತವರ್ಣಕ ಕೆಲವು ಪ್ರಾಣಿಗಳ ಪಿತ್ತದಲ್ಲಿಯೂ ನಾಯಿಗಳ ಜರಾಯುವಿನಲ್ಲಿಯೂ ಕೆಲವು ಜಾತಿಯ ಪಕ್ಷಿಗಳ ಮೊಟ್ಟೆಗಳ ಹೊದಿಕೆಯಲ್ಲಿಯೂ ಕಂಡುಬರುತ್ತದೆ. ಬಣ್ಣವಿಲ್ಲದ ಸ್ಫಟಿಕ ಮಿಶ್ರಣವಾದ ಮಿಸೊಬಿಲಿರೂಬಿನ್, ಕಿತ್ತಳೆ ಬಣ್ಣದ ಸ್ಟಟಿಕ ವರ್ಣಕವಾದ ಯೂರೋಬಿಲಿನ್ ಮತ್ತು ಮಲದಲ್ಲಿರುವ ಸ್ಟರ್ಕೊಬಿಲಿನ್ ಇವು ಕರುಳಿನಲ್ಲಿ ಪಿತ್ತವರ್ಣಕಗಳು ಏಕಾಣುಗಳಿಂದ ಅವನತಿ ಹೊಂದುವುದರಿಂದ ಲಭಿಸುತ್ತವೆ. ಇವು ಪ್ರಮುಖವಾದವು. ಏಕೆಂದರೆ ಮಲಮೂತ್ರಗಳಲ್ಲಿ ಇವುಗಳ ಇರುವಿಕೆ ಅಥವಾ ಇಲ್ಲದಿರುವಿಕೆಯಿಂದ ಪಿತ್ತದ ರೋಗವಿಜ್ಞಾನ ವೈವಿಧ್ಯವನ್ನು ಗೊತ್ತು ಮಾಡಬಹುದು. ಬಿಲಿರೂಬಿನ್ ಪಿತ್ತದೊಡನೆ ಕರುಳಿಗೆ ಹೋಗುವುದು. ಇದನ್ನು ಕರುಳಿನ ಆದಿಭಾಗದಲ್ಲಿರುವ ದ್ರವದಲ್ಲಿ ಸುಲಭವಾಗಿ ಪತ್ತೆ ಮಾಡಬಹುದು. ಮಗು ಹುಟ್ಟಿದ ಹೊಸದರಲ್ಲಿ ಈ ವರ್ಣಕ ಮಲದೊಂದಿಗೆ ಬದಲಾವಣೆ ಇಲ್ಲದೆ ಹೊರದೂಡಲ್ಪಡುವುದು. ಆದರೆ ಮುಂದಿನ ಕೆಲವು ವಾರಗಳಲ್ಲಿಯೇ, ಕರುಳಿನಲ್ಲಿ ವೃದ್ಧಿಸುವ ಏಕಾಣುಗಳ ಮೈದೋರುವಿಕೆಯಿಂದಾಗಿ ಮಿಕ್ಕ ವರ್ಣಕಗಳಿಗಿಂತ ಬಿಲಿರೂಬಿನ್ ಕಡಿಮೆ ಮೊತ್ತದಲ್ಲಿ ಕಂಡುಬರುವುದು. 

	ಬಲಿರೂಬಿನ್ನಿನ ರಚನೆಯನ್ನು ಹಿಂದಿನ ಚಿತ್ರದಲ್ಲಿ ತೋರಿಸಲಾಗಿದೆ.

	ರಕ್ತ ದ್ರವದಲ್ಲಿ ಬಲಿರೂಬಿನ್ ಹೆಚ್ಚಳ ಮತ್ತು ದೇಹದ ನಾನಾ ಭಾಗಗಳಲ್ಲಿ ಕಾಣಿಸಿಕೊಳ್ಳುವ ಹಳದಿ ಬಣ್ಣದ ವಿಶೇಷತೆಗೆ ಕಾಮಾಲೆ ಎಂದು ಹೆಸರು. ರಕ್ತದಲ್ಲಿ ಬಿಲಿರೂಬಿನ್ ಹೆಚ್ಚುವುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು ರಕ್ತದಲ್ಲಿರುವ ಹೀಮೋಗ್ಲಾಬಿನ್ ಹೆಚ್ಚು ಮೊತ್ತದಲ್ಲಿ ಅಪಕ್ಷಯವಾಗುವುದು. ಎರಡನೆಯದು ಯಕೃತ್ತಿನ ಒಳಗೂ ಹೊರಗೂ ಪಿತ್ತ ಹರಿಯುವ ನಾಳಗಳಲ್ಲಿ ಅಡಚಣೆಗಳು ಒದಗುವುದು. ರಕ್ತಾಪಕ್ಷಯದ ಕಾರಣವಿಲ್ಲದೆಯೇ ವಂಶಪಾರಂಪರ್ಯವಾಗಿ ಇರುವ ಕಾಮಾಲೆಯ ನಿದರ್ಶನಗಳೂ ವರದಿಯಾಗಿವೆ. ರಕ್ತದ ಗರಣಿಗಟ್ಟುವ ಗುಣ ಪಿತ್ತವರ್ಣಕದಿಂದ ನಿಧಾನವಾಗುತ್ತದೆ. ಇದು ಬಹುಶಃ ವರ್ಣಕ ರಕ್ತದಲ್ಲಿ ಸುಣ್ಣದ ಲವಣಗಳನ್ನು ಧೃತಿಗೊಳಿಸುವುದರಿಂದ ಇರಬಹುದು. ಕೆಲವರಲ್ಲಿ ಬಿಲಿರೂಬಿನ್ ಉತ್ಪತ್ತಿಯಾಗುವುದಿಲ್ಲ. ಅಥವಾ ಆದರೂ ಕರುಳಿನಲ್ಲಿ ಲ್ಯೂಕೊಯೂರೊಬಿಲಿನ್ ಆಗಿ ಪರಿವರ್ತಿತವಾಗುವುದು. ಈ ಕಾಯಿಲೆಯವರ ಮಲದಲ್ಲಿ ಕಾಣಬಹುದಾದ ವಿಚಿತ್ರ ಬಿಳುಪು ಬಣ್ಣ ಇದರಿಂದ ಇರಬಹುದು. 
(ಎಂ.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ